ಮಂಗಳೂರು ಕಂಬಳಕ್ಕೊಂದು ದೊಡ್ಡ ಅಪವಾದ; ಇತಿಹಾಸ ಪ್ರಸಿದ್ಧ ಮುಲ್ಕಿ ಅರಸು ಕಂಬಳದ ದೈವಶಕ್ತಿ ಮುನಿಯಿತೇ
ಅರಸು ಕಂಬಳದ ಹಿನ್ನಲೆ: ಇತಿಹಾಸ ಪ್ರಸಿದ್ಧ ಮೂಲ್ಕಿ ಅರಸು ಕಂಬಳವು ತುಳುನಾಡಿನ ಜಾನಪದ ಕ್ರೀಡೆಯಾಗಿ ವಿಶಿಷ್ಟ ಪರಂಪರೆಯನ್ನು ಹೊಂದಿದೆ. ಅರಸು ಕಂಬಳವು 18ನೇ ಶತಮಾನದ ಮಧ್ಯಾವಧಿಯಲ್ಲಿ ಆರಂಭವಾಗಿದ್ದು, ಅರಸರ ಮನೆಯ ಎದುರಿನ ಗದ್ದೆಯಲ್ಲಿ ಕಂಬಳ ನಡೆಯಬೇಕೆಂಬ ಆಶಯದಂತೆ ಅಜಾನುಬಾಹು ಆಗೋಳಿ ಮಂಜನವರಿಂದ ಇದರ ಏರ್ಪಾಡಾಗಿತ್ತು ಎನ್ನಲಾಗುತ್ತದೆ. ಗದ್ದೆಯಲ್ಲಿ ಕಂಬಳ ನಡೆದರೂ ಅರಸರು ಗದ್ದೆಗೆ ಇಳಿಯುವುದಿಲ್ಲ ಹಾಗೂ ನೇರವಾಗಿ ಕಂಬಳ ವೀಕ್ಷಿಸುವುದಿಲ್ಲ. ಆದರೆ ಅರಸರಿಗೆ ಸಲ್ಲಬೇಕಾದ ಎಲ್ಲಾ ಮರ್ಯಾದೆಗಳನ್ನು ಸಂಪ್ರದಾಯದಂತೆ ನೀಡಲಾಗುತ್ತದೆ.ಎರುಭಂಟ ದೈವವು ಕೋಲ ಕಟ್ಟಿಕೊಂಡು ಸೀಮೆಯ ಜನರಿಗೆ ಹಾಗೂ ಅರಸರಿಗೆ ಅಭಯ ನೀಡುವ ಸಂಪ್ರದಾಯವೂ ಇಂದಿಗೂ ಜೀವಂತವಾಗಿದೆ.
ಅರಸು ಕಂಬಳಕ್ಕೆ ಒಂದು ತಿಂಗಳ ಮುಂಚಿತವಾಗಿ ಜೋಯಿಸರು ನಿಗದಿ ಮಾಡಿದ ಮುಹೂರ್ತದಲ್ಲಿ ಅರಸರ ಕೋಣಗಳು ಮೊದಲು ಗದ್ದೆಗೆ ಇಳಿಯುತ್ತವೆ. ನಂತರ ಭಾವಗುತ್ತು, ಭರ್ಕೆಯವರು ತಮ್ಮ ತಮ್ಮ ಮರ್ಯಾದೆಯಂತೆ ಕೋಣಗಳನ್ನು ಇಳಿಸುವ ಕ್ರಮ ಇಂದಿಗೂ ಮುಂದುವರಿದಿದೆ.
ಕಂಬಳದ ದಿನ ಅರಮನೆಯ ಕೋಣ ಹೊರಡುವ ವೇಳೆ ಕೊಡಿಕಟ್ಟುವ ಸಂಪ್ರದಾಯವಿದ್ದು, ಅಣಕು ಕಂಬಳದ ನಂತರ ಪಡುತೋಟದ ಗ್ರಾಮಸ್ಥರಿಂದ ಉಳುಮೆ ಕಾರ್ಯ ನಡೆಯುತ್ತದೆ. ಬಪ್ಪನಾಡಿನ ಕಾಂತು ಸೇವೆಗಾರರ ಕೋಣಗಳು ಅರಸರ ಅನುಮತಿ ಪಡೆದು ಕಂಬಳಕ್ಕೆ ಇಳಿಯುವ ಪದ್ಧತಿಯೂ ಈಗಲೂ ಇದೆ. ಬಪ್ಪನಾಡು ದೇವಾಲಯದಲ್ಲಿ ಹಣ್ಣು–ಕಾಯಿ ಪೂಜೆ ನೆರವೇರಿಸಿ ತಂದ ಪ್ರಸಾದವನ್ನು ಕಂಬಳ ಗದ್ದೆಗೆ ಹಾಕಿದ ಬಳಿಕ ಕೋಣಗಳನ್ನು ಇಳಿಸಲಾಗುತ್ತದೆ. ಮೂಲ್ಕಿಯಂತಹ ಸೀಮೆಯಲ್ಲಿ ಕಂಬಳ ತನ್ನ ಮೂಲ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದೆ.
ಅರಸು ಕಂಬಳವು ಐತಿಹಾಸಿಕವಾದ ಸಾಂಪ್ರದಾಯಿಕ ಕಂಬಳ. ಆ ಕಂಬಳವನ್ನು ಜಿಲ್ಲಾ ಕಂಬಳ ಸಮಿತಿಯಡಿ ಸೇರಿಸುವಾಗ ಕೆ. ಗುಣಪಾಲ ಕಡಂಬ ಅವರು ಅಲ್ಲಿನ ಅರಸರ ಅಪೇಕ್ಷೆಯಂತೆ, ಮೂಲ್ಕಿ ಅರಸು ಕಂಬಳಕ್ಕೆ ಪಂಚಾಂಗ ಜ್ಯೋತಿಷ್ಯ ನಿರ್ಧಾರದಲ್ಲಿ ದಿನ ನಿಘಂಟು ಮಾಡುವುದು ಎಂದು ಪುಸ್ತಕದಲ್ಲಿ ಬರೆಯಲಾಗಿತ್ತು ಎನ್ನಲಾಗುತ್ತಿದೆ.
ದೈವಶಕ್ತಿ ಮುನಿಯಿತೇ..?
ಕಂಬಳದ ಯಜಮಾನ(ಪಟ್ಟದರಸ)ನ ಜನ್ಮ ಲಗ್ನ,ರಾಶಿ ನಕ್ಷತ್ರಕ್ಕೆ ತಾಳೆಯಾಗುವಂತೆ ಯಾವುದಾದರೂ ಒಂದು ಶನಿವಾರ ದಿನವನ್ನು ನಿಗದಿಪಡಿಸುವುದು.ಈ ಬಾರಿ ಮಂಗಳೂರು ಸಂಸದ ಬೃಜೇಶ್ ಚೌಟರ ನೇತೃತ್ವದ ಕಂಬಳವನ್ನು ಬೇರೆ ದಿನಾಂಕದಲ್ಲಿ ಮಾಡಬೇಕೆಂದು ಕೋರಿಕೆ ಸಲ್ಲಿಸಿದಾಗ ಅದಕ್ಕೆ ಸಮಿತಿ ಕೂಡಾ ಒಪ್ಪದೆ ಅರಸು ಕಂಬಳದ ಅರಸರಿಗೆ ಬೇಸರ ತರಿಸಿತ್ತು.
ಮಂಗಳೂರಿನ ಕಂಬಳದ ದಿನವೇ ಮೂಲ್ಕಿ ಅರಸು ಕಂಬಳವನ್ನೂ ನೆರವೇರಿಸಲೇಬೇಕಾಯಿತು. ಅರಸರ ಮನೆಯವರಿಗೆ ಬೆಂಬಲಿಗನಾಗಿ ಪ್ರಿಯದರ್ಶಿನಿ ಸಹಕಾರಿ ಸಂಘದ ಅಧ್ಯಕ್ಷ ವಸಂತ ಬೆರ್ನಾಡ್ ಅವರು ಸಹಕರಿಸಿದ್ದರು. ಐತಿಹಾಸಿಕ ಅಥವಾ ಪರಂಪರೆಯ ಕಂಬಳಕ್ಕೆ ಅದರದ್ದೇ ಆದ ಕಟ್ಟು ನಿಟ್ಟುಗಳು, ದೈವದ ಆಚರಣೆಗಳಿದೆ. ಯಜಮಾನನ ಜಾತಕ ಲಗ್ನಾದಿ ರಾಶಿ ನಕ್ಷತ್ರಕ್ಕೆ ತಾಳೆಯಾಗುವ ದಿನ ಗೊತ್ತುಮಾಡುವುದೇಕೆ ಎಂದರೆ ಅಲ್ಲಿ ದೈವಗಳಿಗೆ ನೇಮ, ಪನಿಯಾರ ಇತ್ಯಾದಿ ಇರುತ್ತದೆ. ಎಲ್ಲ ದಿನವೂ ಅದಕ್ಕೆ ಸರಿಯಾಗುವುದಿಲ್ಲ. ರಾಜನ್ ದೈವಗಳಿಗೆ ಇಚ್ಚಾನುಸಾರ ದಿನದಂದು ಕೋಲ ಪನಿಯಾರ ಮಾಡಲಾಗುವುದಿಲ್ಲ. ಕಂಬಳ ಕರೆಗೆ ಒಟ್ಟಾರೆಯಾಗಿ ಕೋಣ ಇಳಿಸುವುದು ಮುಗಿಸುವುದು ಸಾಧ್ಯವಿಲ್ಲ.ಮುಲ್ಕಿ ಅರಸು ಕಂಬಳಕ್ಕೆ ಈ ರೀತಿಯಲ್ಲಿ ಸವಾಲು ಒದಗಿದ್ದು ಇದುವೇ ಮೊದಲು. ಕಂಬಳ ಸಮಿತಿಯೇ ಮುಲ್ಕಿ ಅರಸು ಕಂಬಳವನ್ನು ಭಯ ಭಕ್ತಿಯಿಂದ ಗೌರವಿಸುತ್ತ ಬಂದಿತ್ತು.
ಮಂಗಳೂರಿನ ಸಂಸದ ಏರ್ಪಡಿಸುತ್ತಿರುವ ರಾಮ ಲಕ್ಷ್ಮಣ ಕಂಬಳದ ಕಾರ್ಯಕ್ರಮದಲ್ಲಿ ಭಾರೀ ದೊಡ್ಡ ಅಪಚಾರ,ಅವಮಾನ ಉಂಟಾಯಿತು. ಗುಣಪಾಲ ಕಡಂಬ ಮತ್ತಿತರರ ನಡುವಿನ ವ್ಯಕ್ತಿಗತ ಅಥವಾ ಬೇರೆ ಬಗೆಯ ಸೇಡು ಕ್ರಮಗಳು ಏನೇ ಇದ್ದರೂ ಆ ಎಲ್ಲ ಆಗು ಹೋಗುಗಳ ಅಪವಾದ ಸಂಸದ ಬೃಜೇಶ್ ಚೌಟ ಅವರ ಮುಂಡಾಸಿಗೆ ಕೆಂಡವಾಯಿತು.
ಅಷ್ಟೆಲ್ಲ ರಾದ್ಧಾಂತವಾದರೂ, ಸ್ವತಃ ಕಡಂಬರು ಕೇಳಿಕೊಂಡರೂ ಬೃಜೇಶ ಚೌಟ ತನ್ನ ಮಾತನ್ನೇ ದುಬಾರಿ ಮಾಡಿಕೊಂಡು ಏನೊಂದೂ ಹೇಳಿಕೆ ಅಥವಾ ವಿಷಾದ ಸೂಚಿಸಲಿಲ್ಲ .ಅದಕ್ಕೆ ಕಾರಣ ಮುಲ್ಕಿ ಅರಸು ಕಂಬಳದ ದೈವಶಕ್ತಿಗಳು.
ಆಧುನಿಕ ಪ್ರಪಂಚ ಏನೇ ಹೇಳಿದರೂ ಕೂಡ ತುಳುನಾಡಿನ ನೆಲದ ದೈವಗಳೇ ಹೆಚ್ಚು ಪ್ರಭಾವಶಾಲಿ ಶಕ್ತಿ ಅನ್ನುವುದು ಕಟು ಸತ್ಯ. ಬೇರೆ ಎಲ್ಲ ದೇವರು, ದೇವಸ್ಥಾನಗಳೇನಿದ್ದರೂ ಕೂಡಾ ಅಲ್ಲಿ ಪ್ರತಿ ಮೂಲೆಯಲ್ಲೂ ದೈವಗಳನ್ನೇ ಪ್ರತಿಷ್ಠಾಪಿಸಲಾಗಿರುತ್ತದೆ.
ಮಂಗಳೂರು ಕಂಬಳಕ್ಕೊಂದು ದೊಡ್ಡ ಅಪವಾದ ಅಥವಾ ದೈವ ಶಾಪ ಸಿಕ್ಕಿದೆ. ಬೃಜೇಶ್ ಚೌಟ ಅವರು ಗಂಭೀರವಾಗಿ ಚಿಂತಿಸುವುದು ಅಗತ್ಯವಾಗುತ್ತದೆ.
-ವಿ. ಕೆ. ವಾಲ್ಪಾಡಿ
ಕಾಮೆಂಟ್ ಬಿಡಿ