ಉಡುಪಿ ಜಿಲ್ಲಾ;ಸ್ಪೀಡ್ ರಾಡಾರ್ ಕ್ಯಾಮರಾಗಳು ಅಧಿಕೃತವಾಗಿ ಕಾರ್ಯಾರಂಭ
ಉಡುಪಿ ಮೇ 22: ಉಡುಪಿ ಜಿಲ್ಲೆಯಾದ್ಯಂತ ರಾಷ್ಟ್ರೀಯ ಹೆದ್ದಾರಿಯ ಆರು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಸ್ಪೀಡ್ ರಾಡಾರ್ ಕ್ಯಾಮರಾಗಳು ಅಧಿಕೃತವಾಗಿ ಕಾರ್ಯಾರಂಭ ಮಾಡಿವೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕ್ಯಾಮರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರನ್ನು ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯಿಂದಲೇ ಮಾನಿಟರ್ ಮಾಡಿ, ದಂಡದ ಚಲನ್‌ಗಳನ್ನು ವಾಹನ ಮಾಲೀಕರ ಮನೆಗೆ ಅಂಚೆ (Post) ಮೂಲಕ ಕಳುಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾವಳಿಗಳ ಅನ್ವಯ ಸದ್ಯ ಆರು ಪ್ರಮುಖ ಸ್ಥಳಗಳಲ್ಲಿ ವೇಗದ ಮಿತಿಯೊಂದಿಗೆ ಈ ಕ್ಯಾಮರಾಗಳನ್ನು ಸಕ್ರಿಯಗೊಳಿಸಲಾಗಿದೆ:
- ಕಾರ್ಕಳದ ದೂಪದಕಟ್ಟೆ: ಗರಿಷ್ಠ ವೇಗದ ಮಿತಿ ಗಂಟೆಗೆ 60 ಕಿ.ಮೀ.
- ಪಡುಬಿದ್ರೆಯ ಉಚ್ಚಿಲ: ಗರಿಷ್ಠ ವೇಗದ ಮಿತಿ ಗಂಟೆಗೆ 80 ಕಿ.ಮೀ.
- ಕಾಪುವಿನ ದಂಡತೀರ್ಥ ಶಾಲೆ ಬಳಿ: ಗರಿಷ್ಠ ವೇಗದ ಮಿತಿ ಗಂಟೆಗೆ 80 ಕಿ.ಮೀ.
- ಕೋಟದ ತೆಕ್ಕಟ್ಟೆ: ಗರಿಷ್ಠ ವೇಗದ ಮಿತಿ ಗಂಟೆಗೆ 80 ಕಿ.ಮೀ.
- ಗಂಗೊಳ್ಳಿಯ ತ್ರಾಸಿ: ಗರಿಷ್ಠ ವೇಗದ ಮಿತಿ ಗಂಟೆಗೆ 80 ಕಿ.ಮೀ.
- ಬೈಂದೂರಿನ ನಾಯಕನಕಟ್ಟೆ: ಗರಿಷ್ಠ ವೇಗದ ಮಿತಿ ಗಂಟೆಗೆ 80 ಕಿ.ಮೀ.
ಯಾವೆಲ್ಲಾ ಉಲ್ಲಂಘನೆಗಳು ಪತ್ತೆಯಾಗಲಿವೆ?: ಈ ಹೈಟೆಕ್ ರಾಡಾರ್ ಕ್ಯಾಮರಾಗಳು ಕೇವಲ ಅತಿವೇಗದ ಚಾಲನೆ (Over-speeding) ಮಾತ್ರವಲ್ಲದೆ, ಬೈಕ್‌ನಲ್ಲಿ ಟ್ರಿಪಲ್ ರೈಡಿಂಗ್, ಸೀಟ್ ಬೆಲ್ಟ್ ಧರಿಸದೆ ಇರುವುದು, ಹೆಲ್ಮೆಟ್ ರಹಿತ ಚಾಲನೆ, ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಹಾಗೂ ತಪ್ಪು ದಿಕ್ಕಿನಲ್ಲಿ ಚಾಲನೆ (Wrong side driving) ಮಾಡುವುದನ್ನು ನಿಖರವಾಗಿ ಪತ್ತೆ ಹಚ್ಚಲಿವೆ.
7 ದಿನಗಳಲ್ಲಿ ದಂಡ ಪಾವತಿಗೆ ಸೂಚನೆ:ಕ್ಯಾಮರಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸಿದ್ಧಪಡಿಸಲಾಗುವ ಚಲನ್‌ಗಳು ಅಂಚೆ ಮೂಲಕ ಮನೆಗೆ ತಲುಪಲಿವೆ. ಚಲನ್ ಸ್ವೀಕರಿಸಿದ 7 ದಿನಗಳ ಒಳಗಾಗಿ ಸವಾರರು ಉಡುಪಿ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗೆ ತೆರಳಿ ದಂಡದ ಮೊತ್ತವನ್ನು ಪಾವತಿಸಬಹುದಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇದಲ್ಲದೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಇನ್ನೂ 14 ಸ್ಥಳಗಳಲ್ಲಿ ಇಂತಹ ಕ್ಯಾಮರಾ ಅಳವಡಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲೇ ವರ್ಕ್ ಆರ್ಡರ್ ನೀಡಲಾಗುವುದು ಎಂದು ಎಸ್‌ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
ಕಾಮೆಂಟ್ ಬಿಡಿ